ತಮಿಳು ಲಿಪಿ

ಭಾರತಾದ್ಯಂತ ಶಾಸನ ರಚನೆಗೆ ಬಳಸುತ್ತಿದ್ದ ಬ್ರಾಹ್ಮಿ ವರ್ಣಮಾಲೆಯಿಂದ ಆಧುನಿಕ ತಮಿಳು ಲಿಪಿ ರೂಪ ತಾಳಿದೆ.  ಸುಮಾರು 3 ನೆಯ ಶತಮಾನದಿಂದಲೂ ತಮಿಳು ಶಾಸನಗಳನ್ನು ಬರೆಯಲು ತಮಿಳುನಾಡಿನಲ್ಲಿ ಬಳಕೆಯಾಗುತ್ತಿದ್ದ ಬ್ರಾಹ್ಮೀ ವಿಶಿಷ್ಟವಾಗಿ ತಮಿಳು ಭಾಷೆಯಲ್ಲಿ ಉಪಯೋಗದಲ್ಲಿರುವ ಅಕ್ಷರಗಳು ಪ್ರಕಾರಗಳನ್ನು ಸಹ ಹೊಂದಿದೆ.  ಉದಾ : ರೂಢಿಯಲ್ಲಿದ್ದ ಳ,ರ,ಣ, ಬ್ರಾಹ್ಮಿ ಅಕ್ಷರಗಳು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ತಮಿಳಿನ ಳ,ರ,ಣ ವರ್ಣಗಳನ್ನು ರೂಪಿಸಿಕೊಳ್ಳಲಾಯಿತು.  ತಮಿಳು ಶಾಸನಗಳಿಗೆ ಮತ್ತು ಸಂಸ್ಕøತ ಪ್ರಾಕೃತ ವರ್ಣಮಾಲೆಗಳ ವರ್ಗೀಯ ವ್ಯಂಜನಗಳ ಅಥವಾ ಮಹಾಪ್ರಾಣಗಳ ಬಳಕೆ ಅಗತ್ಯವಿರಲಿಲ್ಲ.  ಅದಕ್ಕೆ ಕಾರಣ ಇಷ್ಟೇ : ಈ ವರ್ಣಗಳನ್ನು ಗ್ರಹಿಸುವುದಕ್ಕೆ ಮುಂಚಿನಿಂದಲೂ ಅವುಗಳ ವರ್ಗ ಮತ್ತು ಮಹಾಪ್ರಾಣಗಳಿಗೆ ಬದಲಾಗಿ ಅವುಗಳ ವರ್ಗ ಪ್ರಥಮಗಳನ್ನು ಬಳಸಿಕೊಳ್ಳಲು ತಮಿಳು ವ್ಯಾಕರಣ ಅವಕಾಶ ನೀಡುತ್ತದೆ.  ರಮನಾಥಪುರಂ, ಮಧುರೈ, ತಿರುನೆಲ್‍ವೇಲಿ ಮತ್ತು ತಿರುಚಿರಪಳ್ಳಿ ಜಿಲ್ಲೆಗಳ ಕೆಲವು ಗವಿ ಶಾಸನಗಳು ಕ್ರಿ.ಪೂ. 3ನೆಯ ಶತಮಾನದಷ್ಟು ಪ್ರಾಚೀನವಾದವು.  ಅದೇ ಸ್ಥಳಗಳ ಇತರ ಕೆಲವು ಶಾಸನಗಳು ಹಾಗೂ ಅರಿಕಮೇಡು ಮತ್ತು ಉರೈಯೂರ್ ಗೀರುಚಿತ್ರಗಳು ಕ್ರಿಸ್ತಶಕೆಯ ಮೊದಲ 2 ಶತಮಾನಗಳಿಗೆ ಸೇರಿದವು.  ದಕ್ಷಿಣ ವರ್ಣಮಾಲೆ ಕನ್ನಡ ಮತ್ತು ತೆಲುಗು ವರ್ಣಮಾಲೆಗಳಿಗೆ ಪೂರ್ವಗಾಮಿ ದಕ್ಷಿಣ ವರ್ಣಮಾಲೆಯಿಂದ ಪ್ರತ್ಯೇಕಗೊಂಡಂತೆ ತಮಿಳು ಲಿಪಿಯನ್ನು ಸುಮಾರು ಕ್ರಿ.ಶ. 3ನೆಯ ಶತಮಾನದ ಶಾಸನಗಳಲ್ಲಿ ಗುರುತಿಸಬಹುದು.  ಅರಚ್ಚತ್ತೂರು ಗವಿಶಾಸನಗಳು ಮತ್ತು ಆಂಡಿಪಟ್ಟಿ ನಿಕ್ಷೇಪದ ನಾಣ್ಯಗಳ ಮೇಲಿನ ಲಿಪಿಗಳು  ಈ ಕಾಲಕ್ಕೆ ಸೇರಿದವು.  ಈ ಹಂತದ ಪ್ರಾರಂಭ ಕಾಲದಲ್ಲಿ ವ್ಯಂಜನ ಮತ್ತು ಚುಕ್ಕೆ ಹಾಕುವ ಪದ್ಧತಿ ಬಂದಿತು.  ಅಕ್ಷರಗಳ ಮೇಲ್ಭಾಗಗಳು ಎಡಕ್ಕೆ ಲಂಬಿಸಿಕೊಂಡು ಅವುಗಳಿಗೆ ಇಳಿಗಳು ಸೇರಿದ್ದು ತಮಿಳು ಲಿಪಿಯ ಮತ್ತೊಂದು ಲಕ್ಷಣ.  ಈ ಪ್ರಕ್ರಿಯೆ, ನಿಧಾನವಾಗಿ ಹಾಗೂ ಸ್ಥಿರವಾದ ಹಂತಗಳಲ್ಲಿ 6ನೆಯ ಶತಮಾನದ ಮಧ್ಯಭಾಗದವರೆಗೆ ಸಾಗಿ ಆ ಶತಮಾನದಲ್ಲಿ ಅಕ್ಷರಗಳು ಈಗಿನ ರೂಪ ತಾಳಿದವು.  ಕ್ರೈಸ್ತಮತ ಪ್ರಚಾರಕರಿಂದ ತಮಿಳು ನಾಡಿನಲ್ಲಿ ಮುದ್ರಣಕಾರ್ಯ ಪ್ರಾರಂಭವಾದಮೇಲೇ ಅಕ್ಷರಗಳಿಗೆ ಅದೇ ರೂಪ ಸ್ಥಿರವಾಗಿ ನಿಂತು ಹೆಚ್ಚಿನ ಬದಲಾವಣೆಗಳಿಗೆ ಅವಕಾಶವಾಗಲಿಲ್ಲ.

ಎಡಗಡೆಯ ಚಿತ್ರಗಳಲ್ಲಿ ಆಕಾರ ಹಾಗೂ ಕಕಾರಗಳ ಬೆಳವಣಿಗೆಯನ್ನೂ, ಮೇಲಿನ ಚಿತ್ರದಲ್ಲಿ ತಮಿಳು ವರ್ಣಮಾಲೆಯನ್ನೂ ತೋರಿಸಿದೆ.
(ಕೆ.ಜಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ